ನಮ್ಮ ಮುಖಕ್ಕೆ ಲಕ್ಷಣವನ್ನು ತಂದುಕೊಡುವುದೇ ತಲೆಕೂದಲು, ಒಮ್ಮೆ ಕೂದಲುದುರಲು ಅಥವಾ ನೆರೆಯಲು ಪ್ರಾರಂಭವಾದರೆ ತಡೆಯುವುದು ಬಹಳ ಕಷ್ಟ, ನಿಯಮಿತವಾದ ಆರೈಕೆಯಿಂದ ಕೇಶಸಂಪತ್ತನ್ನು ಉಳಿಸಿಕೊಳ್ಳಬಹುದು.

ಈಗಲಂತೂ ಕೂದಲಿಗೆ ಎಣ್ಣೆ ಹಚ್ಚುವ ಮಂದಿ ಕಡಿಮೆ ಶಾಂಪೂ, ಕಂಡೀಷನರ್ ಗಳೇ ನಮಗೆ ಪ್ರಿಯ, ಇದರಲ್ಲಿರುವ ರಾಸಾಯನಿಕಗಳಿಂದಾಗುವ ಅಡ್ಡಪರಿಣಾಮಗಳ ಚಿಂತೆಯೇ ನಮಗಿಲ್ಲ, ನಮ್ಮಲ್ಲಿ ವಾಡಿಕೆಯಲ್ಲಿರುವ ವಾರಕ್ಕೊಮ್ಮೆ ಎಣ್ಣೆಸ್ನಾನ ಒಳ್ಳೆಯ ಅಭ್ಯಾಸ, ರಾತ್ರಿ ಮಲಗುವ ಮುನ್ನ ಅಂಗೈಯಲ್ಲಿ ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ಬೆರಳುಗಳಿಂದ ಸವರಿ ಮೃದುವಾಗಿ ತಿಕ್ಕುವುದರಿಂದ ಕೂದಲಿಗೆ ಅಗತ್ಯವಾದ ಜಿಡ್ಡು ದೊರೆಯುತ್ತದೆ, ಕೃಶವಾಗಿ ಬಾಗಿರುವ ಕೂದಲನ್ನು ಸುಧಾರಿಸುತ್ತದೆ.

ತಲೆಹೊಟ್ಟಿನಿಂದ ಕೂದಲನ್ನು ಕಾಪಾಡಲು ಬುರುಡೆ ಮತ್ತು ಕೂದಲ ಸ್ವಚ್ಚತೆ ಅಗತ್ಯ, ಬಿಸಿಲಿಗೆ ಅಥವಾ ಧೂಳಿಗೆ ಹೋಗಿಬಂದ ನಂತರ ಕೂದಲನ್ನು ತೊಳೆಯುವುದು ಉತ್ತಮ, ಕೂದಲು ಗಂಟಾಗಿದ್ದರೆ ಬೆರಳುಗಳಿಂದ ನಯವಾಗಿ ಬಿಡಿಸಿ, ಬ್ರಶ್ಶಿನಿಂದ, ಬಾಚಣಿಗೆಯಿಂದ ಕೀಳಬೇಡಿ.

ಕೂದಲಿಗೆ ಎಣ್ಣೆ ಸವರಿ ಒಂದೆರಡು ತಾಸು ಬಿಟ್ಟು ತೊಳೆಯಿರಿ, ವಿಪರೀತ ಬಿಸಿಯಾದ ನೀರು ಮೃದುವಾದ ಕೂದಲನ್ನು ಒರಟು ಮಾಡುತ್ತದೆ, ಒಂದುಚೂರೂ ಸೋಪು ಅಥವಾ ಶಾಂಪೂ ಉಳಿಯದಂತೆ ತೊಳೆದುಕೊಳ್ಳಿ, ಒರೆಸಿಕೊಳ್ಳುವಾಗ ಟವೆಲಿನಿಂದ ಹಗ್ಗದಂತೆ ಹೊಸೆಯಬೇಡಿ, ಮೊದಲು ಬುರುಡೆಯನ್ನು ನಯವಾಗಿ ಉಜ್ಜಿ ನಂತರ ಕೂದಲನ್ನು ಗಂಟಾಗದಂತೆ ಒರೆಸಿ.

ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿತಿಯೂ ಕೂದಲ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಆಹಾರದಲ್ಲಿ ಹೆಚ್ಚು ಬಿ ಸಿ ಮತ್ತು ಇ ವಿಟಮಿನ್ ಗಳಿದ್ದರೆ ಕೂದಲು ಸೊಂಪಾಗಿ, ಕಾಂತಿಯುತವಾಗಿ ಬೆಳೆಯುತ್ತದೆ. ತರಕಾರಿ, ಹಣ್ಣು, ಯೀಸ್ಟ್, ಮೊಸರು, ಮೊಟ್ಟೆ, ಮೀನುಗಳು ಕೂದಲ ಅರೋಗ್ಯಕ್ಕೆ ಪೂರಕ, ಮನಸ್ಸು ನೆಮ್ಮದಿಯಿಂದ ಉದ್ವೇಗರಹಿತವಾಗಿದ್ದರೆ ಅತಿಯಾದ ಕೂದಲು ಉದುರುವಿಕೆಯ ಸಮಸ್ಯೆ ಇರುವುದಿಲ್ಲ, ಬಿಳಿಕೂದಲ ಸಮಸ್ಯೆಯೂ ಕಡಿಮೆಯಾಗುತ್ತದೆ, ಆರೋಗ್ಯವಂತ ದೇಹ ಮತ್ತು ಮನಸುಗಳು ಕೂದಲ ಬೆಳವಣಿಗೆಗೆ ಸಹಾಯಕವಾಗಿವೆ.

ಜೊತೆಯಲ್ಲಿ ಇದನ್ನು ಓದಿ ನೀವು ಕೇಳಿರದ ತೆಂಗಿನ ಎಣ್ಣೆಯ ರಹಸ್ಯ.

ಆಯುರ್ವೇದದ ಪ್ರಾಚೀನ ಗ್ರಂಥಗಳಲ್ಲೊಂದಾದ ಸುಶ್ರುತ ಸಂಹಿತೆಯಲ್ಲಿ ತೆಂಗಿನೆಣ್ಣೆಯನ್ನು ಹೃದ್ಯಂ ಎಂದಿದ್ದಾರೆ. ಅಂದರೆ ಹೃದಯಕ್ಕೆ ಅತಿ ಹಿತಕರ ಎಂದರ್ಥ. ಆದರೆ ಇತರ ಕಂಪನಿಗಳ ಎಣ್ಣೆಯ ಮಾರುಕಟ್ಟೆಯನ್ನು ವಿಸ್ತರಿಸಲು ತೆಂಗಿನ ಎಣ್ಣೆಯ ಕುರಿತು ಅಪಪ್ರಚಾರ ಮಾಡಲಾಗಿದೆ.

ಪ್ರಕೃತಿ ನಮಗೆ ಕೊಟ್ಟಿರುವ ಅನಂತ ಉಡುಗೊರೆಗಳಲ್ಲಿ ತೆಂಗು ಶ್ರೇಷ್ಟವಾದುದು. ಇದರ ಬೇರೆ ಬೇರೆ ರೂಪಗಳಾದ ತಿರುಳು, ಎಳನೀರು, ಎಣ್ಣೆ ಮತ್ತು ಹಾಲು ಸೌಂದರ್ಯ ಹೆಚ್ಚಿಸುವ ಸರ್ವೋತ್ತಮ ಸಾಧನಗಳು.
ಕೊಬ್ಬರಿ ಎಣ್ಣೆ ಬೇಗ ನಮ್ಮ ಚರ್ಮದೊಂದಿಗೆ ವಿಲೀನಗೊಂಡು ಒಣ ಮತ್ತು ಸುಕ್ಕುಗಳಿರುವ ಚರ್ಮವನ್ನು ನುಣುಪಾಗಿಸುತ್ತದೆ. ವರ್ಜಿನ್ ಕೊಬ್ಬರಿ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟ್, ತ್ವಚೆಯನ್ನು ಫ್ರೀ ರಾಡಿಕಲ್ಸ್ ನಿಂದ ರಕ್ಷಿಸಿ, ವಯೋಸಹಜ ಸುಕ್ಕನ್ನೂ ದೂರ ಮಾಡುತ್ತದೆ.

ದಕ್ಷಿಣ ಭಾರತದ ಮಹಿಳೆಯರ ತಲೆಗೂದಲು ಉತ್ತರ ಭಾರತೀಯರಿಗಿಂತ ದಟ್ಟವಾಗಿ, ನೀಳವಾಗಿ ಮತ್ತು ಕಪ್ಪಾಗಿರುವುದನ್ನು ಗಮನಿಸಿರಬಹುದು. ಆಹಾರದಲ್ಲಿ ಮತ್ತು ಕೂದಲಿಗೂ ಅವರು ಉಪಯೋಗಿಸುವ ತೆಂಗು, ಕೊಬ್ಬರಿ ಎಣ್ಣೆಯೇ ಇದರ ಕಾರಣ. ಕೂದಲ ಮೂಲದಿಂದಲೇ ಪೋಷಣೆ ಒದಗಿಸಿ ಕೂದಲ ನೈಸರ್ಗಿಕ ಆರೋಗ್ಯವನ್ನು ಕಾಪಾಡುತ್ತದೆ.

ತೆಂಗಿನ ತುರಿಯ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದರೆ ಚರ್ಮ ಇಡೀದಿನ ಲವಲವಿಕೆಯಿಂದ ಕೂಡಿರುತ್ತದೆ. ತುಟಿಯು ಒಡೆದಿದ್ದರೆ ರಾತ್ರಿ ಮಲಗುವ ಮುನ್ನ ಹಾಗೂ ಬೆಳಗ್ಗೆ ಎದ್ದಾಗ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಲೇಪಿಸಿ. ಇದರಿಂದ ತುಟಿಯ ಆರ್ದ್ರತೆ ಉಳಿಯುತ್ತದೆ. ಒಡೆದ ಹಿಮ್ಮಡಿಗೆ, ರಾತ್ರಿ ಮಲಗುವ ಮುನ್ನ ಪೆಟ್ರೋಲಿಯಂ ಜೆಲ್ಲಿಯೊಂದಿಗೆ ಕೊಬ್ಬರಿ ಎಣ್ಣೆ ಸೇರಿಸಿ ಹಚ್ಚಿ. ಸ್ನಾನದ ಮೊದಲು ಇಡೀ ದೇಹಕ್ಕೆ ಲಘುವಾಗಿ ಕೊಬ್ಬರಿ ಎಣ್ಣೆಯಲ್ಲಿ ಮಸಾಜ್ ಮಾಡಿ. ಸುಸ್ತು, ಟೆನ್ಶನ್ ದೂರವಾಗಿ ದೇಹ ಹಗುರಾಗುತ್ತದೆ. ಸ್ನಾನದ ನಂತರ ಟರ್ಕಿ ಟವೆಲಿನಲ್ಲಿ ಮೃದುವಾಗಿ ಒರೆಸಿಕೊಳ್ಳಿ. ಇದರಿಂದ ಜಿಡ್ಡಿನಂಶ ಉಳಿದು ತ್ವಚೆ ತಾಜಾ ಆಗಿರುತ್ತದೆ.

ಕೊಬ್ಬರಿ ಎಣ್ಣೆಯ ಕೊಬ್ಬು, ತಾಯಿಯ ಹಾಲಿನ ಕೊಬ್ಬಿಗೆ ಸಮನಾದುದು. ರೋಗಪ್ರತಿರೋಧಕ ಶಕ್ತಿಯನ್ನೂ ಇದು ಹೆಚ್ಚಿಸುತ್ತದೆ. ಇಂದೇ ಕೊಬ್ಬರಿ ಎಣ್ಣೆಯನ್ನು ಬಳಸಲು ಪ್ರಾರಂಭಿಸಿ ಮತ್ತು ರೂಪ ಲಾವಣ್ಯವನ್ನು ಹೆಚ್ಚಿಸಿಕೊಳ್ಳಿ.

LEAVE A REPLY

Please enter your comment!
Please enter your name here